ಪುಟಗಳು

ಸೋಮವಾರ, ಫೆಬ್ರವರಿ 13, 2023

ಅಯೋಧ್ಯೆಯ ಮಾದರೀಯ ಪುಟ್ಟ ಮಂದಿರ

 ನೋಡ ಬನ್ನಿ ರಾಮ ಮಂದಿರ

ಯೋಧ್ಯೆಯ ಮಾದರೀಯ ಪುಟ್ಟ ಮಂದಿರ

ಪಕ್ಕದಲ್ಲಿ  ರಾಮ ಚಂದಿರ

ನೋಡಲಂತೂ ಎಷ್ಟು ಸುಂದರ ||

 

ಶಿಖರದಲ್ಲಿ ಪುಟ್ಟ ಲಾಂಛನ

ಮಂದಿರಕ್ಕೆ ಕೇಸರೀಯ ಬಣ್ಣ ಲೇಪನ

ದ್ವಾರದೊಳಗೆ ನೋಡಿ ರಾಮನ

ಸೀತ ಲಕ್ಷ್ಮಣ ಹನುಮ ಸಹಿತನ     ||  ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||


ಹಗಲಿನಲ್ಲಿ ಸೂರ್ಯ ನಾರತಿ

ಮಂದಿರಕ್ಕೆ ಸಂಜೆಯಲ್ಲಿ ದೀಪದಾರತಿ

ಹಾಡುಭಜನೆ ನಮ್ಮ ಸಂಸ್ಕೃತಿ

ಇದುವೆ ರಾಮಗೆ ಮಂಗಳಾರತಿ   || ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||

 

ಸುತ್ತಿ ಬಂದು ಕೈಯ ಮುಗಿಯುತ

ರಾಮ ರಾಮ ರಾಮ ಎನ್ನುತ

ಕೈಯ ತಟ್ಟಿ ಭಜನೆ ಮಾಡುತ

ರಾಮದೇವರ ಹಾಡು ಹಾಡುತ  || ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||

ನಾನು ಮೋಸಹೋಗಿದ್ದು

 

ನಾನು ಮೋಸಹೋಗಿದ್ದು



ನಾನು ಆನೇಕಸಲ ಮೋಸಹೋಗಿದ್ದೀನಿ. ಎಷ್ಟೋಸಲ ನನಗೆ "ನಾನು ಇರುವುದೇ ಜನರಿಂದ ಮೋಸಹೋಗೋದಕ್ಕೆ" ಅನ್ನಿಸಿದೆ.ಇಂತಹ ಸನ್ನಿವೇಶಗಳನ್ನು  ಹಾಸ್ಯಮಯವಾಗಿ ನಿಮ್ಮಮುಂದೆ ಇಡಲು ಇಚ್ಚಿಸುತ್ತೇನೆ.
ನನ್ನ ತಲೆಗೆ ಯಾವುದೇ ಅಳತೆಯ, ಯಾವುದೇ ತರಹದ  ಟೋಪಿ ಹಾಕಬಹುದೆನಿಸುತ್ತದೆ. ನನ್ನ ತಲೆಯನ್ನು ನೋಡಿದ ಅನೇಕರಿಗೆ ಟೋಪಿಹಕಬೆಕೆನ್ನಿಸುತ್ತದೆಯೋ ಏನೋ!

ಇಲ್ಲಿ, ನಾನು ಅಥವಾ ನನ್ನ ಮನೆಯವರು ಬೇಸ್ತುಬಿದ್ದ ಪ್ರಸಂಗಗಳನ್ನು ವಿವರಿಸಿದ್ದೇನೆ.

ಬಾಚಣಿಗೆಯಿಂದ ......ಟೋಪಿ 

ಬಾಚಣಿಗೆ ಬೇಕೆ ಬಾಚಣಿಗೆ ಎಂದು ಮಾರುವವರು ಬಂದಾಗ ಬಾಗಿಲು ತೆರೆದಿದ್ದು ನಮ್ಮಮ್ಮ.ನಮಗೆ ಕಂಡದ್ದು , ಗಂಡ-ಹೆಂಡತಿ , ಗಾಡಿಯಲ್ಲಿ ಬಾಚಣಿಗೆ ಮಾರುತ್ತಿದ್ದದ್ದು. ಬಾಚಣಿಗೆ ನೋಡುತ್ತಿದ್ದ ನಮ್ಮಮ್ಮನ ಕೈ ನಲ್ಲಿ ಇದ್ದ ಮೊಡವೆ ಯಂಥಹ  ಒಂದು ಸಾಧಾರಣ ಗುಳ್ಳೆಯನ್ನು  ನೋಡಿದ ಆಕೆ, "ಅಯ್ಯೋ! ಇದನ್ನು ಏಕೆ ಹೀಗೆಬಿಟ್ಟಿದ್ದೀರಿ. ಇದು ಮೈಎಲ್ಲ ಹರಡುತ್ತದೆ. ಇದಕ್ಕೆ ನಮಗೆ ಔಷದ ಗೊತ್ತು. ಮಾಡುವುದು ಬಹಳ ಸುಲಭ. ನಾವೇ ಮಾಡಿಕೊಡುತ್ತೇವೆ" ಎಂದಳು.
ಇದಕ್ಕೆ ಏನೇನು ಬೇಕು? ಎಂದು ನಮ್ಮಮ್ಮ ಕೇಳಿದ್ದಕ್ಕೆ, "ಎಲ್ಲವಸ್ತುಗಳು ನಿಮ್ಮ ಅಡುಗೆಮನೆಯಲ್ಲಿಯೇ ಇವೆ , 1ಲೀಟರ್ ಕೊಬ್ಬರಿ ಎಣ್ಣೆ ,ಸ್ವಲ್ಪ ಕರ್ಪೂರ,ಏಲಕ್ಕಿ.....,ಇದನ್ನು ಚೆನ್ನಾಗಿ ಕಾಯಿಸಲು ಚಿಕ್ಕ ಗ್ಯಾಸ್ ಒಲೆ ಸಾಕು  " ಎಂದಳು.


ಎಲ್ಲವನ್ನೂ ಕೊಟ್ಟು, ಅವರು ಏನುಮಾಡುತ್ತಾರೆಂದು ನಾವೆಲ್ಲ ನೋಡುತ್ತಾ ಕುಳಿತೆವು. ಒಲೆಯಮೇಲೆ ಎಲ್ಲವನ್ನು ಹಾಕಿ,ಕಾಯಿಸಲು ಶುರುಮಾಡಿದರು.


ನಂತರ, ಗಂಡ ಹೇಳಿದ"ಇಷ್ಟೆಲ್ಲಾ ಮಾಡಿದ್ದೀರಿ,ಇದಕ್ಕೆ, ಸ್ವಲ್ಪ ಅಡಿಗೆ ಅರಿಶಿನ,1ಕೆ‌ಜಿ ಪಚ್ಚಕರ್ಪೂರ,..... ಇವೆಲ್ಲಾ ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತದೆ ಬೇಗ ತೆಗೆದುಕೊಂಡುಬನ್ನಿ.ಇದನ್ನು ಹಾಕಿದರೆ ಇನ್ನೂ ಅನೇಕ ರೀತಿಯಲ್ಲಿ  ಚರ್ಮದ ಆರೋಗ್ಯ ಕಾಪಾಡುತ್ತದೆ" ಎಂದನು.

ಈಗ ಅವನುಕೊಟ್ಟ ಸ್ಲಿಪ್ ಹಿಡಿದು  ಅಂಗಡಿಗೆ ಓಡುವ ಸರದಿ ನನ್ನದಾಯಿತು. ಎಲ್ಲವನ್ನೂ ತಂದು ಲೆಕ್ಕ ಹಾಕಿದಾಗ, ಸರಿಯಾಗಿ 1000 ರೂಪಾಯಿ ಆಗಿತ್ತು!



ಮತ್ತೆ ಎಲ್ಲವನ್ನೂ ಹಾಕಿ, ಅದನ್ನು ದೊಡ್ಡಪತ್ರೆಗೆ ಹಾಕಿ ಕಾಯಿಸತೊಡಗಿದರು.ನಂತರ ಎಲ್ಲವನ್ನೂ ಕಲಕಿ "ನಡಿಯಿರಿ , ಹೋಗೋಣ" ಎಂದಾಗ ನಾವು "ಎಲ್ಲಿಗೆ?" ಎಂದೆವು. "ನಮ್ಮವರ ಗುರುತಿನ ಅಂಗಡಿಯಲ್ಲಿ ಇದಕ್ಕೆ ಸ್ವಲ್ಪ ಚೂರ್ಣ ಹಾಹಿಸಬೇಕು" ಎಂದನು. ಅಂಗಡಿ ವಿಳಾಸ ಕೊಡಿ, ನಾವು ನಾಳೆ ಹಾಕಿಸುತ್ತೇವೆ, ಎಂದೆವು. ಇಲ್ಲ,ಇದು ಆರುವುದರಲ್ಲಿ ಹಾಕಿಸದಿದ್ದರೆ ಎಲ್ಲ ವ್ಯರ್ಥ ಎಂದನು.

ಸರಿ, ನಡೆಯಿರಿ ಯೆಂದು ನಾನು,ನನ್ನ, ತಂದೆಯವರು, ಅವನನ್ನು ಕರೆದುಕೊಂಡು, ಅದನ್ನು ಸರಿಯಾದ ಪಾತ್ರೆಗೆ ಹಾಕಿ, ಅದನ್ನು ತೆಗೆದುಕೊಂಡು ಕಾರಿನಲ್ಲಿ ಹೊರಟೆವು." ಅಂಗಡಿ ಬಹಳ ದೂರ ಬೇಗ ನಡೆಯಿರಿ, ಇದು ಆರಿಹೋಗುತ್ತದೆ" ಎಂದು ದುಂಬಾಲು ಬಿದ್ದನು.

ಕೊನೆಗೂ ಅಂಗಡಿ ತಲುಪಿದೆವು.ಅಲ್ಲಿ ಇವನಿಗೆ ಪರಿಚಯವಿದ್ದಂತೆ ಇರುವವನೊಡನೆ," ಚೂರ್ಣ ಗಳನ್ನು ಹಾಕು" ಎಂದನು.
ಅಂಗಡುಯವನು ," ಇದು ವಜ್ರ ದ ಪುಡಿ, ಇದು ಮುತ್ತಿನಪುಡಿ .........ಇದು ಚಿನ್ನದಪುಡಿ"  ಎಂದು ಅಂಗಡಿಯವನು ಖುಷಿಯಾಗಿ ಒಂದೊಂದೇ ಹಾಕುತ್ತಾ ಹೋದಾಗ ನಮಗೆ ಘಾಬರಿಯಾಗಿ, ಎಷ್ಟಾಗುವುದೊ ಏನೋ ಅನ್ನಿಸತೊಡಗಿತು." ಸಾಕು" ಎಂದೆವು.
ಇನ್ನೂ ಹಾಕಿದರೆ ನಾವು ದುಡ್ಡುಕೊಡಲಾರೆವೆಂಬುದು ತಿಳಿದಮೇಲೆ,ನಿಲ್ಲಿಸಿದನು.ಆಮೇಲೆ, ಬಾಚನಿಗೆಯವನು, ಅಂಗಡಿಯವನಿಗೆ ದುದ್ದುಕೊಡಲು ಹೇಳಿದನು. ಅಂಗಡಿಯವನು ಕೊಟ್ಟ ಬಿಲ್ ನೋಡಿ ನಾನು, ನನ್ನ ತಂದೆ ಬೆರಗಾದೆವು.
ಸರಿಸುಮಾರು 7000 ರೋಪಾಯಿಗಳು. ಅಷ್ಟು ದುಡ್ಡು ನಮ್ಮಹತ್ತಿರ ಯಿಲ್ಲ ಎಂದಾಗ,ಚೆಕ್ ಕೊಡಿ ಪರವಾಗಿಲ್ಲ ಎಂದನು. ನಾವು, ಏನೂಕೊಡುವುದಿಲ್ಲ,ನಮಗೆ ಇದು ಬೇಡ ಎಂದಾಗ," ನಾನು ಅನೇಕ ಚೂರ್ಣಗಳನ್ನು ಇದರಲ್ಲಿ ಹಾಕಿದ್ದೇನೆ,ಅದನ್ನು ವಾಪಸ್ಸು ಕೊಡಿ ಇಲ್ಲದಿದ್ದರೆ ಗಲಾಟೆ  ಮಾಡುತ್ತೇನೆ" ಎಂದನು. ವಿಧಿಯಿಲ್ಲದೆ ಚೆಕ್ ನೀಡಿದೆವು.


ಅಷ್ಟುಹೊತ್ತಿಗೆ,ಬಾಚಣಿಗೆಯವನು  ನಾಪತ್ತೆಯಾಗಿದ್ದನು. ಇತ್ತ,ಮನೆಯಬಳಿ, ಅವನ  ಹೆಂಡತಿಯೂ, ಗಾಡಿಯೂ ಇರಲ್ಲಿಲ್ಲ.
ಇಷ್ಟಾದಮೇಲೆ  ನಮಗೆ ಮೋಸದ ಅರಿವಾಯಿತು.
ಹೋಗಲಿ, ಎಣ್ಣೆಯನ್ನಾದರೂ ಬಲಸೋಣ ಎಂದು ಕೆಲವುದಿನ ಉಪಯೋಗಿಸಿದೆವು.ಅದರಿಂದ ವಾಸಿಯಾಗುವಡಿರಲಿ,ಇನ್ನೆನಾದರು ಆಗುವದೆನಿಸಿತು. ಮೊದಮೊದಲು ಕರ್ಪೂರದವಾಸನೆ ಬರುತ್ತಿತ್ತು.ಕೆಲವು ದಿನಗಳನಂತರ ,ಗಬ್ಬು ವಾಸನೆ ಬಂದಿತು. ಅದನ್ನು ದೂರದ ತಿಪ್ಪೆಗೆ ಚೆಲ್ಲಿ ಬಂದೆವು.


ಹುಲ್ಲಿಲ್ಲದೆ  ಹುಲ್ಲುಮೇದಿದ್ದು!

ನಮ್ಮ ಮನೆಯ ಮುಂದೆ 15x20 ಅಡಿ ಮಣ್ಣಿನ ಜಾಗದಲ್ಲಿ ಹುಲ್ಲುಹಾಸನ್ನು  ಮಾಡಬೇಕೆಂದು ಆಸೆಯಿತ್ತು.ಅದಕ್ಕಾಗಿ ಯಾರಾದರು ಒಳ್ಳೆಯ ಹಾಗೂ ತಿಳಿದ ಕೆಲಸಗಾರರನ್ನು ಹುಡುಕುತ್ತಿದ್ದೆವು. ಇದನ್ನು ಹೇಗೋ ತಿಳಿದವನೊಬ್ಬ "ನಿಮ್ಮ ಮನೆಯ ಮುಂದಿನ ಜಾಗದಲ್ಲಿ ಹುಲ್ಲುಹಾಕಿಕೊಡಲೇ?" ಎಂದಾಗ, ನಾನು "ಓಹೋ, ಬನ್ನಿ. ನಾನು ನಿಮ್ಮನ್ನೇ ಹುಡುಕುತ್ತಿದ್ದೆ" ಎಂದು , ಕೆಲಸ ಒಪ್ಪಿಸಿದೆ.
 ಇದಕ್ಕೆ ಸ್ವಲ್ಪ ಹಣಬೇಕಾಗುತ್ತದೆ ಎಂದಾಗ, ನಾನೇ ಮುಂದಾಗಿ 500ರೂ ಕೊಟ್ಟೆ.ಅವನಿಗಾಗಲೇ ನಾನು ಪೆದ್ದನೆಂದು ತಿಳಿಯಿತೆಂದು ಕಾಣುತ್ತದೆ. "ನಿಮಗೆ ಭಾರತದ ಹುಲ್ಲು ಸಾಕೇ ಅಥವಾ ಜಪಾನು ,ಜರ್ಮನಿ ...... ಹುಲ್ಲುಬೇಕೆ?, ಅವೆಲ್ಲ ಬಹಳ ದಿನ ಬಾಳಿಕೆ ಬರುತ್ತದೆ" ಎಂದ. ಆಯಿತು ಎಂದೆ.ಹಾಗಾದ್ರೆ  ಇನೂ 1000ರೂ  ಕೊಡಿ ಎಂದಾಗ, ವಿಧಿ ಇಲ್ಲದೆ ಕೊಟ್ಟೆ. ಬೆಳಿಗ್ಗೆ ಅವನ ಕೆಲವು ಸಾಮಗ್ರಿಗಳನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗಿ (ನಮಗೆ ನಂಬಿಕೆಗಾಗಿ ಅನ್ನಿಸುತ್ತೆ), ಮಧ್ಯಾನದ ಹೊತ್ತಿಗೆ ಬಂದ.

.

ನೆಲವನ್ನು ಅಲ್ಲಲ್ಲಿ ಅಗೆಯುತ್ತಾ, ಸ್ವಲ್ಪ ಹುಲ್ಲಿನಕುಪ್ಪೆಗಳನ್ನು ಇಡುತ್ತಾ,ಚಿತ್ರದಲ್ಲಿರುವಂತೆ ಮಾಡಿದನು. ನಂತರ,ಇದು ಬಹಳಬೇಗ ಬೆಳೆಯುತ್ತದೆ, ಆದರೆ ಇದಕ್ಕೆ,ಈಗಲೇ ಗೊಬ್ಬರ ಹಾಕಬೇಕು. ಇಲ್ಲದಿದ್ದರೆ ಎಲ್ಲ ಒಂದೇ ವಾರದಲ್ಲಿ ಒಣಗಿ ಹೋಗುತ್ತದೆ ಎಂದಾಗ, ನಾನು "ಎಲ್ಲಿಂದ ತರಬೇಕು, ನಾನು ತರುತ್ತೇನೆ" ಎಂದೆ.ಇಲ್ಲ,ನಿಮಗೆ ತಿಳಿಯುವದಿಲ್ಲ!,ನಾನೇ ತಂದಿದ್ದೇನೆ,ಅದಕ್ಕೆ,1000ರೂ ಆಗುತ್ತದೆ ಎಂದ.ಅದನ್ನೂ ಕೊಟ್ಟೆ. ಆಗ ಅವನು ರೈಲುಬಿಡಲು ಶುರು ಮಾಡಿದ. ಈ ಹುಲ್ಲು, ಸಾಮಾನ್ಯದ್ದಲ್ಲ, ಒಂದು ತಿಂಗಳಲ್ಲಿ ಬೆಳೆಯುತ್ತದೆ. ನೀವು ಆಗಾಗ,ಕತ್ತರಿಸದಿದ್ದರೆ,ಅಸಹ್ಯವಾಗುತ್ತದೆ. ಅಂದವಾಗಿಟ್ಟುಕೊಂಡರೆ ಬಂದವರೆಲ್ಲ ಆಶ್ಚರ್ಯ ಪಡುತ್ತಾರೆ ಎಂದ.


ನಾನು,"ಹುಲ್ಲು ವಿಪರೀತ ಬೆಳೆದಂತೆ, ಅದನ್ನುದೊಡ್ಡ ಕತ್ತರಿ ಯಲ್ಲಿ ಕತ್ತರಿಸಲಾಗದೆ,ಲಾನ್ ರೋಲರ್ ನಲ್ಲಿ ಕತ್ತರಿಸುತ್ತಿರುವಂತೆ"  ಹಗಲುಗನಸು  ಕಂಡೆ.(ಚಿತ್ರ ನೋಡಿ)
ನಂತರ,ಕೂಲಿ 1000ರೂ ಕೇಳಿದ. ಒಟ್ಟು,2500ರೂ ಆದರೂ,  ಹೂದರೆ ಹೋಗಲಿ ಹುಲ್ಲುಬೇಕಲ್ಲ ಅಂದುಕೊಡೆ.
ಅವನು ತರದೆ ಇದ್ದ , ನಮ್ಮ ಕೆಲವು ಗುದ್ದಲಿ,ಮುಂತಾದವನ್ನು, ಕೇಳಿದ.ಇಲ್ಲೇ ಮುಂದಿನಬೀದಿಯಲ್ಲಿ .....(ನಮಗೆ ಪರಿಚಯವಿದ್ದವರ ಹೆಸರು ಹೇಳಿ) ಅವರೂ ಹೀಗೆಯೇ ಮಾಡಿಸಿತ್ತಾರಂತೆ . ಸಂಜೆ ತಂದುಕೊಡುತ್ತೇನೆ ಎಂದ. ಅದನ್ನು ಕೊಟ್ಟು ಕಳಿಸಿ,ಸ್ವಲ್ಪಸಮಯದ ನಂತರ ಅವರಿಗೆ ಫೋನ್ ಮಾಡಿದಾಗ,ಅವರು, "ನಮ್ಮನ್ನೂ ಹುಲ್ಲು ಹಾಕಬೇಕೆ ಎಂದು ಕೇಳಿದ್ದ, ನಾವು ಈಗ ಬೇಡ ಎಂದವು" ಎಂದರು. ಈಗ ನಮಗೆ  ಗುದ್ದಲಿ ಮೋಸದ ಅರಿವಾಯಿತಾದರೂ , ಹುಲ್ಲು ಇದೆಯಲ್ಲ, ಬೆಳೆಯಲಿಎಂದು  ಹೂಲ್ಲಿಗೆ ದಿನಾ,ನೀರು ಹಾಕಿದ್ದೇ ಹಾಕಿದ್ದು. 15 ದಿನದಲ್ಲಿ, ಎಲ್ಲವೂ ಒಣಗಿಹೋಯಿತು.

ಆಗ ನಮಗೆ ಸಂಪೂರ್ಣ ಮೋಸ ತಿಳಿಯಿತು. ಇನ್ನೇನು ಮಾಡಲಾಗದೆ ಸುಮ್ಮನಾದೆವು.
     ಪಾಟು ತಲೆಕೆಳಗಾದರೆ ಟೋಪಿ!


 ಹುಲ್ಲಂತೂ ಆಗಲಿಲ್ಲ, ಆ  ಜಾಗದಲ್ಲಿ ಏನುಮಾಡುವದು?ಈಗ ನಮ್ಮ ಗಮನ, ಪಾಟು ಗಳಗಡೆ ಬಿತ್ತು.ಸರಿ, ಪಾಟುಗಳನ್ನು ಕೊಂದದ್ದಾಯಿತು.


ಎಲ್ಲ ಪಾಟು ಗಳನ್ನೂ ಒಳ್ಳೆಯ ಗಿಡ ಇರುವಂತೆಯೇ ಕೊಂಡು ಜೂಡಿಸಿ ಟ್ಟೆವು. 1000ರೂ ಗಿಂತ ಹೆಚ್ಚಾಗೆ ಖರ್ಚಾಯಿತು. ಸ್ವಲ್ಪ ದಿನಗಳನಂತರ,ಗಿಡಗಳು ಸರಿಯಾಗಿ ಬೆಳೆಯಲಿಲ್ಲ. ಒಣಗಲು ಶುರುವಾಯಿತು. ಇದನ್ನು ಹೊರಗಿನಿಂದಲೇ ಗಮನಿಸಿದ ಯಾರೋ ಒಬ್ಬ," ನನ್ನಬಳಿ, ಗಿಡ ಚೆನ್ನಾಗಿ ಬೆಳೆಯುವ ಆಧುನಿಕ ಗೊಬ್ಬರ ಯಿದೆ. ಹಾಕುತ್ತೇನೆ" ಎಂದ. ನಾವು ಸರಿ ಎನ್ನಲೂ ಕಾಯದೆ, ಸಣ್ಣ ಸಣ್ಣ ಪೊಟ್ಟಣಗಳನ್ನು ಹಾಕಲು ಪ್ರಾರಂಭಿಸಿದ. "ಅದಕ್ಕೆ ಎಷ್ಟಾಗುತ್ತದೆ" ಎನ್ನುವ ಹೊತ್ತಿಗೆ, ಬೇಗ ಬೇಗ 10 ಪೊಟ್ಟಣ ಮುಗಿಸಿದ. "ಸಾಕು ನಿಲ್ಲಿಸು, ಅದಕ್ಕೆ  ಎಷ್ಟು?" ಎಂದು ಗಲಾಟೆ ಮಾಡಿದಾಗ,ಅವನು  ಮೆಲ್ಲನೆ "ಏನಿಲ್ಲ 1 ಪೊಟ್ಟಣಕೆ 100 ರೂ ಅಷ್ಟೇ" ಎಂದ. ನಾವು ದುದ್ದುಕೊಡುವುದಿಲ್ಲವೆಂದಾಗ, ನಿಲ್ಲಿಸಿದ. ಕೊನೆಗೂ ತಕರಾರುಮಾಡಿ, 500ರೂ  ವಸೂಲಿ ಮಾಡಿದ.ಗಿಡಗಳೆಲ್ಲ, ಬಹುಬೇಗ ಒಣಗಿಹೂದವು.
 ಮಾಮೂಲಿನಂತೆ,ನಾನು ನನ್ನ ಹೆಂಡತಿ "ನಿನ್ನಿಂದನೇ ಹೀಗಾಗಿದ್ದು" ಎಂದು ಒಬ್ಬರನ್ನೊಬ್ಬರು ದೂಷಿಸಿಕೊಂಡೆವು.


ಪಾಟೇ  ತಲೆಕೆಳಗಾಗಿ ಟೋಪಿಯಾಯಿತು !

ಭಾನುವಾರ, ಮಾರ್ಚ್ 25, 2018

ತಿರುಪತಿ ಪ್ರವಾಸ




ಹೌದು!ತಿರುಪತಿಗೆ ಎಷ್ಟು ಸಲ ಹೋದರೂ ಮತ್ತೆ ಹೋಗಬೇಕೆನಿಸುವುದು.
 ಬೆಟ್ಟದ ಮೇಲೆ ಇದ್ದಾಗ, ಮೈಮನ ಪುಳು ಕಿತಗೊಳ್ಳುವುದು.
 ದಿನವೆಲ್ಲಾ ಅಲ್ಲೆ ಸುತ್ತಾಡುತ್ತಿರಬೇಕೆನಿಸುವುದು.




ಶೀಗ್ರದಶ೯ನದಲ್ಲಿ, ಸುಮಾರು ಒಂದು ಗಂಟೆಯಲ್ಲಿ ದೇವರ ದಶ೯ನ
ಆಯಿತು.

ಅಲ್ಲಿ "ಸಾರಂಗಿ "ಹೋಟೆಲ್ ನಲ್ಲಿ ತಿಂಡಿ ತಿಂದೆವು.
ಮಾರನೇ ದಿನ, ನಾನು, ಬೆಟ್ಟದ ಮೇಲಿನ ಅನೇಕ ಚಿತ್ರಗಳನ್ನು ತೆಗೆದೆ.
 ತಿರುಪತಿಯಲ್ಲಿ ಸೂಯೋ೯ ದಯ

ಮಾಮೂಲಿನಂತೆ, ಶಾಪಿಂಗ್. ಶ್ರೀನಿವಾಸನ
LED ಪೂಟೊಗಳೆ ಅಧಿಕ.



ನಂತರ ಬೆಟ್ಟ ಇಳಿದು, ಅಲುಮೇಲು ಮಂಗಾಪುರ ನೋಡಿದೆವು.
ನಂತರ ಬೆಂಗಳೂರಿಗೆ ವಾಪಸಾದೆವು.

ತಿರುಪತಿಯ ಈ  ತಿರುವುಮುರುವು ದಾರಿ ಏನು ಹೇಳುತ್ತದೆ?
ಜೀವನವೂ ನೇರವಲ್ಲ. ಮುಂದೆ ಹೋಗಿ ತಿರುಗಿದ ನಂತರವೇ
ನಮಗೆ ಮುಂದಿನ ದಾರಿ ಕಾಣುವುದು. ಎಂದು ಹೇಳುತ್ತದೆ.
ನನ್ನ ಈಗಿನ ತಿಳುವಳಿಕೆ ಪ್ರಕಾರ, ದೇವರನ್ನು ಬೇಡಿದರೆ, ದಾರಿಯನ್ನು
ನೇರಮಾಡುವುದಿಲ್ಲ. ಅದರ ಬದಲು, ನಮಗೆ ತಿರುವು ದಾರಿಯಲ್ಲಿ
ಸರಿಯಾಗಿ ತಿರುಗಿ ಹೋಗಲು ಶಕ್ತಿ ಕೊಡುತ್ತಾನೆ.

ಗುರುವಾರ, ಮಾರ್ಚ್ 1, 2018

ದುಬೈ ಪ್ರವಾಸ

ದುಬೈ ಪ್ರವಾಸ 
ನನ್ನ ಒಂದು ನಿವೇದನೆ : ಈ ಪ್ರವಾಸದ ಬರಹದಲ್ಲಿ, ಕೆಲವುಕಡೆ ಕೇವಲ ತಮಾಷೆಗಾಗಿ, ನಡೆದದ್ದನ್ನು ಸ್ವಲ್ಪ ಉತ್ಪ್ರೇಕ್ಸಿಸಿ ಬರೆದ್ದಿದೇನೆಹೊರತು, ಯಾರನ್ನು ಹೀಯಾಳಿಸುವುದಕ್ಕಲ್ಲ.

ನಾವು ಓಲಾ  ಕಾರಿನಲ್ಲಿ ಕುಳಿತು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದೆವು. ನಮ್ಮ ಪೆಟ್ಟಿಗೆಗಳ ತಪಾಸಣೆ ಹಾಗು ನಮ್ಮ ತಪಾಸಣೆಯ ನಂತರ, ಒಂದೆಡೆ ಕೂಡಿಸಿದರು. ನಂತರ ನಮ್ಮ ವಿಮಾನಕ್ಕೆ ಕೊಳವೆಯಾಕಾರದ ಸುರಂಗದ ಮೂಲಕ ಹತ್ತಲು ಹೇಳಿದರು. ನನ್ನ ಹೆಂಡತಿಗೆ ಇದೇ ಮೊದಲ ವಿಮಾನ ಪ್ರಯಾಣ. ನಾವೆಲ್ಲಾ ಎದ್ದು ಹೊರಟಾಗ, ನನ್ನ ಹೆಂಡತಿ, "ವಿಮಾನ ದ ಚಕ್ರಗಳ ಬಳಿ ಹೋಗಬೇಕು" ಎಂದಳು ! ಆಗ ನನಗೆ ಹೊಳೆಯಿತು, ನಾವು ಯಾವುದೇ ಊರಿಗೆ ಪ್ರಯಾಣ ಹೊರಟಾಗಲೂ, ನಾವು ಹೊರಡುವ ವಾಹನಕ್ಕೆ ಈಡುಗಾಯಿ ಒಡೆದು, ನನ್ನ ಹೆಂಡತಿ, ವಾಹನವನ್ನು ಕಣ್ಣಿಗೆ ಒತ್ತಿಕೊಂಡ ನಂತರವೇ   ಹೊರಡುತ್ತಿದ್ದೆವು. ನಾನು ಹೇಳಿದೆ " ವಿಮಾನಕ್ಕೆ ಹಾಗೆಲ್ಲಾ ಈಡುಗಾಯಿ ಒಡೆಯುವ ಹಾಗಿಲ್ಲಾ.ಕಣ್ಣಿಗೆ ಒತ್ತಿಕೊಳ್ಳಲು ಚಕ್ರದ ಬಳಿ ಬಿಡುವುದಿಲ್ಲ" ಎಂದು. ಕೊನೆಗೆ ನಮ್ಮ ಮಕ್ಕಳು " ವಿಮಾನ ದಬಾಗಿಲನ್ನೇ ಕಣ್ಣಿಗೆ ಒತ್ತಿಕೊಂಡು ಹೋಗು'' ಎಂದು ಅವಳನ್ನು ಒಪ್ಪಿಸಿದರು. ಅಂತೂ ನಾವು ವಿಮಾನ ಹತ್ತಿದೆವು!

ನಾವು ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು  ಸೀದಾ ದುಬೈ ವಿಮಾನ ನಿಲ್ದಾಣಕ್ಕೆ ಬಂದೆವು.ಇದು ಪ್ರಪಂಚದ  ಅತಿ ದಟ್ಟಣೆಯ ವಿಮಾನ ನಿಲ್ದಾಣ .ಇಲ್ಲಿ, ನಿಮಿಷಕ್ಕೆ ಒಂದು ವಿಮಾನ ಹಾರುತ್ತದೆ ಮತ್ತು ಇಳಿಯುತ್ತದೆ!
ಈಕೆಳಗಿನ ಪದ್ಯದ ಪ್ರತಿಸಾಲಿನ ಮೊದಲಕ್ಷರ ಗಮನಿಸಿ, "ದುಬೈ ಅಬುದಾಬಿ ಪ್ರವಾಸ " ಎಂದು ಹೊಂದಿಸಿದ್ದೇನೆ!


 ವಿಮಾನ ನಿಲ್ದಾಣದಲ್ಲಿ ನಮಗಾಗಿ ಕಾದು ನಿಂತಿದ್ದ ನಮ್ಮ ನೆಂಟರಾದ ಗಣೇಶ್ ರವರು  ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರ ಮನೆ ಅದ್ಭುತ ಸ್ಥಳದಲ್ಲಿದೆ.



 ಅವರ ಮನೆಯಲ್ಲಿ ರುಚಿಕರವಾದ ಊಟ ಮಾಡಿದ ನಂತರ, ಮನೆಯ ಬಾಲ್ಕನಿಯಲ್ಲಿದ್ದ  ಮುದ್ದಾದ ಹಕ್ಕಿಯ ಅನೇಕ ಚಿತ್ರಗಳನ್ನು ತೆಗೆದೆ. ಅದೇ ಹಕ್ಕಿ ನನಗೆ ಹೇಳಿದಂತೆ ಭಾವಿಸಿ, ಚಿತ್ರಗಳಿಗೆ ಸರಿಹೊಂದುವಂತೆ ಕೆಲವು ಚಿತ್ರಕಥೆ ಬರೆದಿದ್ದೇನೆ.










ಗ್ಲೋಬಲ್ ವಿಲೇಜ್
ಇಲ್ಲಿ ಪ್ರಪಂಚದ ಎಲ್ಲಾ ದೇಶದ  ಚಿಕ್ಕ ಮಾಲ್ ಗಳು ಇವೆ. ಆ ದೇಶಗಳ ಜನರೇ ಅಲ್ಲಿರುವ ಅಂಗಡಿಗಳನ್ನು ನಡೆಸುತ್ತಾರೆ! ನಮಗೆ ಅದೇ ದೇಶಕ್ಕೆ ಹೋಗಿದ್ದೇವೆ ಎಂಬ ಭಾವನೆ ಬರುತ್ತದೆ.








 ಇದನ್ನು ಪೂತಿ೯ ನೋಡಲು ಎರಡು-ಮೂರು  ದಿನಗಳಾದರೂ ಸಾಲದು. ನಡೆದಾಡುವುದೇಕಷ್ಟ.
ಇಲ್ಲಿ ಕಾರು ಮತ್ತು ಬೈಕ್ ಗಳ ಅದ್ಬುತ ಪ್ರದಶ೯ನ ನೋಡಿದೆವು.
ದೊಡ್ಡ ಸಂಗೀತ ಕಾರಂಜಿ (Musical fountain) ಇಲ್ಲಿಯ ಮುಖ್ಯ ಆಕಶ೯ಣೆ.
ದುಬೈ ಮಾಲ್
ಪ್ರಪಂಚದಲ್ಲಿಯೇ ಅತಿ ದೊಡ್ಡ ಮಾಲ್ ಇದು! ಯಾರಾದರೂ ಮಾಗ೯ದಶ೯ಕರಿಲ್ಲದೆ ಇದರಲ್ಲಿ ಓಡಾಡುವದೇ ಕಷ್ಟ. ಇದರೊಳಗೆ ಅನೇಕ ವಿಶ್ವ ಪ್ರಸಿದ್ಧ ಮಳಿಗೆಗಳಿವೆ. ಇದರಲ್ಲಿರುವ ದೊಡ್ಡ ಅಕ್ವೇರಿಯಮ್ ಅನ್ನು ಕೆಳಗೆ ವಿವರಿಸಿದ್ದೇನೆ.
ಅಕ್ವೇರಿಯಮ್ -
ನಾವು ಒಂದು ಗಾಜಿನ ಸುರಂಗದ ಒಳಗೆ ಹೋಗುತ್ತೇವೆ. ಮೀನು ಹಾಗು ಅನೇಕ ಜಲಚರ ಪ್ರಾಣಿಗಳು ನಮ್ಮ ಸುತ್ತಲೂ ಚಲಿಸುತ್ತಿರುತ್ತವೆ.










ಸುರಂಗದಿಂದ ಹೊರಬರುತ್ತಿದ್ದ೦ತೆ, ಮೊಸಳೆ,    ಪೆoಗ್ವಿನ್ ಮುಂತಾದ ಪ್ರಾಣಿಗಳಿವೆ.
ಬುಜ್೯ ಕಲೀಫಾ -
ದುಬೈ ಮಾಲ್ ಒಳಗಿಂದಲೇ ಇದಕ್ಕೆ ದಾರಿ ಇದೆ. ಪ್ರಪಂಚದ ಈಗಿನ ಅತಿ ಎತ್ತರದ ಕಟ್ಟಡ ಇದು! (ಮುಂದಿನ ಅತಿ ಎತ್ತರದ ಕಟ್ಟಡದ ಮಾಡಲ್ ಇದರಲ್ಲಿ ಇಡಲಾಗಿದೆ. ಅದನ್ನೂ ದುಬೈನಲ್ಲೇ ಕಟ್ಟಲಾಗುವುದು!) ಇಲ್ಲಿಯ ಅಫ್ಟ್ 124 ನೇ ಮಹಡಿಗೆ ಸುಮಾರು 50 ಸೆಕೆಂಡುಗಳಲ್ಲಿ ತಲುಪುತ್ತದೆ! ಇದು ಪ್ರಪಂಚದ ಅತಿ ವೇಗದ ಲಿಫ್ಟ್.





124 ನೇ ಮಹಡಿಯಲ್ಲಿ ಗಾಜಿನಿಂದ ಹೊರಗೆ ನೋಡಿದರೆ ಮೈ ನವಿರೇಳುತ್ತದೆ.

                ರಾತ್ರಿಯಲ್ಲಿ  ಬುಜ್೯ ಕಲೀಫಾ  ಬಣ್ಣದ ದೀಪಗಳೊಂದಿಗೆ ಹೀಗೆ ಕಾಣುತ್ತದೆ ↓

ಅಟ್ಲಾಂಟಿಸ್ ಹೋಟೆಲ್ ಮತ್ತು ಪಾಮ್ ಜುಮೇರಾ ಬೀಚ್
ಎಲೆಯಾಕಾರದಲ್ಲಿ ಸಮುದ್ರದಲ್ಲಿ ಕೃತಕವಾಗಿ ನಿಮಿ೯ ಸಿರುವ ಕಟ್ಟಡಗಳ ಮಧ್ಯದಲ್ಲಿ ಈ ಹೋಟೆಲ್ ಇದೆ.
ಇದಕ್ಕೆ, ಸಮುದ್ರದೊಳಗಿನ ಸುರಂಗಮಾರ್ಗದಲ್ಲಿ ಹೋಗಬೇಕು.


ಇಲ್ಲಿ ಮೀನಿನ ಜೊತೆ ನಾವೂ ಈಜಬಹುದು! ಇದಕ್ಕೆ ಸ್ನಾಕ್ ೯ ಲಿ೦ಗ್ ಎಂದು ಹೆಸರು.




ಈ ಕೆಳಗಿನ ಪದ್ಯ ಓದಿ, ನಂತರ  ಅದಕ್ಕೆ 
ಹೊಂದುವ ಕೆಳಗಿನ  ನಾಲ್ಕು ಚಿತ್ರ ನೋಡಿ. 
ನಂತರ  ಮತ್ತೆ ಪದ್ಯ ಓದಿ!






ಅಲ್ಲಿಂದ  ಮಾನೋರೈಲ್ ನಲ್ಲಿ  ಹೊರಟು ಪಾಮ್ ಝುಮೇರಾ  ಸಮುದ್ರ ತೀರಕ್ಕೆ ಬಂದೆವು. 

                                                    ಬುರ್ಜ್ ಅಲ್  ಅರಬ್ ಹೋಟೆಲ್ ↓


                                                       ಝುಮೇರಾ  ಹೋಟೆಲ್ ↓






ಇದರ ಬಳಿ ಉತ್ತಮವಾದ ಸಮುದ್ರ ತೀರ ಇದೆ. ಈ ತೀರದಲ್ಲಿ ಬುಜ್೯ ಅಲ್ ಅರಬ್ ಹೋಟೆಲ್ ಇದೆ. ಸೂಯಾ೯ ಸ್ತ ನೋಡಲು ಈ ಸಮುದ್ರ ತೀರ  ಉತ್ತಮ ಸ್ಥಳ.
ಕ್ರೂಸ್ ದೋಣಿ ಪ್ರಯಾಣ
ಸೂಯಾ೯ಸ್ತದ ನಂತರ, ಊರಿಗೆ ಬಂದು,ಕ್ರೂಸ್ ದೋಣಿಯಲ್ಲಿ, ಸುಮಾರು 40 km. ನಷ್ಟು , ಎಂದರೆ ಎರಡು ಗಂಟೆಗಳ ಪ್ರಯಾಣ ಮಾಡಿದೆವು.



ದೋಣಿಯಲ್ಲೇ ಊಟ, ಮನರಂಜನೆ ಇತ್ತ. ಮೊದಲು ಹೆದರಿದ್ದ ನನ್ನ ಹೆಂಡತಿ, ನಂತರ ಆರಾಮವಾಗಿ ಕಾಯ೯ಕ್ರಮ ವೀಕ್ಷಿಸಿ, ಚಿತ್ರಗಳನ್ನು ಸೆರೆಹಿಡಿದಳು .
ಡಾಲ್ಫಿನ್ ಪ್ರದಶ೯ನ
ಮೂರನೇ ದಿನ, ಕ್ರೀಕ್ ಪಾಕ್೯ ನಲ್ಲಿ ಡಾಲ್ಫಿನ್ ಪ್ರದಶ೯ನ ವೀಕ್ಷಿಸಿದೆವು. ಇದು ಅತ್ಯಂತ ಅದ್ಭುತವಾಗಿತ್ತು.ನೀರಿನಲ್ಲಿ 3-4 ಡಾಲ್ಫಿನ್ ಗಳ ಚೆಂಡಾಟ, ನೀರಿನಿಂದ ಹಾರುವುದು ಇವುಗಳು ಅತ್ಯಂತ ರೋಮಾಂಚಕವಾಗಿತ್ತು.

 ಪಾರ್ಕ್ ಗೆ ಹೊಂದಿಕೊಂಡಂತೆ,  ಲೇಕ್ ಇದೆ.  ಅದರಲ್ಲಿ, ನೀರಿನಲ್ಲಿ ಚಲಿಸಿ, ಆಕಾಶದಲ್ಲಿ ಹಾರುವ ವಿಮಾನವಿದೆ. 






ಮಿರಾಕಲ್ ಗಾರ್ಡನ್ 
ನಾವು ನೋಡಿದ ಅದ್ಭುತಸ್ಥಳಗಳಲ್ಲಿ ಇದು ಒಂದು.















 ಎಕರೆಗಟ್ಟಲೆ  ಹರಡಿರುವ ಈ  ಎಲ್ಲಾ ಗಿಡಗಳಿಗೆ ಹನಿ ನೀರಾವರಿ [drip irrigation] ಮಾಡಿದ್ದಾರೆ.  



ಎಮಿರೈಟ್ಸ್ ನ ಹಳೆಯ ವಿಮಾನವನ್ನೇ ತಂದಿಟ್ಟು , ಅದರಮೇಲೆ ಮಣ್ಣುಹಾಕಿ,  ಹೂವಿನ ಗಿಡಗಳನ್ನು ಬೆಳೆಸಿರುವುದು ಇಲ್ಲಿಯ ಈ ವರ್ಷದ ಆಕರ್ಷಣೆ. ಪ್ರತಿವರ್ಷವೂ, ಇಡೀ  ಹೂವಿನ  ಅಲಂಕಾರಾನ್ನೇ  ಬದಲಾಯಿಸುತ್ತಾರೆ. 






ಅಬುದಾಬಿ
ದುಬೈಯಿಂದ ಮಧ್ಯಾಹ್ನ  ಹೊರಟು, ಬಸ್ಸಿನಲ್ಲಿ ಅಬುದಾಬಿಗೆ ಬಂದೆವು. ತುಂಬಾ ಆರಾಮವಾಗಿದ್ದ ಆ ಬಸ್ಸಿನಲ್ಲಿ, 1 1/2 ಗಂಟೆ ಪ್ರಯಾಣ ಮಾಡಿದ್ದೇ ತಿಳಿಯಲಿಲ್ಲ. ಎಲ್ಲೂ  ತಿರುವಿಲ್ಲದೆ, ಸ್ಕೇಲಿನಲ್ಲಿ ಎಳೆದ ಗೆರೆಯಂತೆ ರಸ್ತೆ ಇತ್ತು!

ಅಬುದಾಬಿಯಲ್ಲೂ ಎಲ್ಲಾ ಕಡೆ, ಅತಿ ಎತ್ತರದ ಕಟ್ಟಡಗಳು ಇವೆ.



                   ಇವರ ಮನೆಯಲ್ಲಿಯೂ  ಬಾಲ್ಕನಿಯಲ್ಲಿ ಹಕ್ಕಿ ಚಿತ್ರ ತೆಗೆದೆ. ಅದಕ್ಕೂ ಚಿತ್ರಕಥೆ ಬರೆದಿದ್ದೇನೆ.







 ರಾತ್ರಿ ಊಟವಾದ ನಂತರ, ಊರು ನೋಡಲು ನಡೆದುಕೊಂಡು ಹೋಗಲು ನಿಧ೯ಸಿದೆವು. ನನಗೆ ನಮ್ಮ ನೆಂಟರಾದ ವಿಕ್ರಮನ ಚಪ್ಪಲಿ ಕೊಟ್ಟರು. ಅದನ್ನು ಧರಿಸಿದಾಗ ನನ್ನ ಹೆಂಡತಿ, "ಇದು ತೀರಾ ಸಡಿಲ, 'ಲಡಕಾ  ಲಡಕಾ ' ಎನ್ನುತ್ತಿದೆ" ಎಂದು ಹೇಳಿ ,ಶ್ವೇತ ಅವರ  ಚಪ್ಪಲಿ ಕೊಟ್ಟಳು. ಅದನ್ನು ನಾನು ಧರಿಸಿದಾಗ ನನ್ನ ಹೆಂಡತಿ ''ಇದು ಹೇಗಿದೆ?" ಎಂದಳು. ನಾನು " ಇದು ನನಗೆ ಸರಿ ಇದೆ, ಆದರೆ ' ಲಡಕೀ ಲಡಕೀ ' ಎನ್ನುತ್ತಿದೆ" ಎಂದೆ.
ಶೇಖ್ ಝಾಯದ್  ಮಸೀದಿ
ಇದು ಅತ್ಯಂತ ಆಕಶ೯ ಕ ಮಸೀದಿ. ಬಹಳ ದೊಡ್ಡದಾಗಿದೆ. ಒಳಗೆ ಅದ್ಬುತವಾಗಿದೆ. ವಿದ್ಯತ್ ದೀಪ ಅಲಂಕಾರವಿದೆ. ಇದರೊಳಗೆ ಹೋಗಲು ಮೀರಾ ಹಾಗು ಶ್ವೇತ "ಅಭಯ" ಎಂಬ ಬಟ್ಟೆ ಧರಿಸಿದರು.
ನನ್ನ ಮಗನ ಚಡ್ಡಿ ಇನ್ನು ಸ್ವಲ್ಪ ಚಿಕ್ಕದಿದ್ದಿದ್ದರೆ  ಅವನು "ಕಂಡೋರ ಬಟ್ಟೆ"( ಗಂಡಸರು ಧರಿಸುವ ಬಟ್ಟೆ  ಹೆಸರು" ಕಂಡೋರ" ) ಧರಿಸಬೇಕಾಗುತ್ತಿತ್ತು.








ಲೂವರ್ ಮ್ಯೂಸಿಯಮ್
ಇಲ್ಲಿ, ಸುಮಾರು ಎಲ್ಲಾ ದೇಶಗಳ ಹಳೆಯ ನಾಗರೀಕತೆಯ ದೃಶ್ಯಗಳು ಇವೆ.



 ಇಲ್ಲಿ ಸುಮಾರು 2 ಗಂಟೆಗಳ ಕಾಲ ನೋಡಿದೆವು
ಹೀಗೆ ಒಂದು ಸಣ್ಣ ಪದ್ಯ:

ಫೆರಾರಿ ವಲ್ಡ೯-ಯಾಸ್ ಮಾಲ್
ಯಾಸ್ ಮಾಲ್ ನ ಒಳಗೆ 'ಫೆರಾರಿ ವಲ್ಡ್೯' ಇದೆ. ನಮ್ಮ ಮಕ್ಕಳಿಗೆ ಇದು ಅತ್ಯಂತ ಇಷ್ಟವಾದ ಸ್ಥಳ. ಮೊದಲು, ಈ ಕಾರನ್ನು ಓಡಿಸಲು ಬೇಕಾಗುವ ತರಬೇತಿಯನ್ನು ಅವರಿಗೆ ಕೊಡಲಾಯಿತು. ನಂತರ, ಅದಕ್ಕೆ ಬೇಕಾದ ಹಲ್ಮೆಟ್, ಇತರ ವಸ್ತ್ರಗಳನ್ನು ನೀಡಿದರು.ನಂತರ ನಮ್ಮ ಮಕ್ಕಳು ಫೆರಾರಿ ಕಾರಿನ ಚಾಲಕರಾಗಿ ಅದನ್ನು ಓಡಿಸಿದರು





ನಾನು ಫೂಟೋ ತೆಗೆಯುವುದರಲ್ಲಿ ತಲ್ಲೀನನಾಗಿ ಮುಂದೆ ಹೋದಾಗ, " ರಸ್ತೆ ಮೇಲೆ ಹೋಗಬೇಡಿ, ಕಾರು ಬರುತ್ತಿದೆ , ಹಿಂದೆ ಬನ್ನಿ" ಎಂದು ಕನ್ನಡದ ಮಾತು ಕೇಳಿ, ತಿರುಗಿ ನೋಡಿದೆ. ಅಲ್ಲಿ ಕೆಲಸ ಮಾಡುವವನೊಬ್ಬ ಮಂಗಳೂರಿನವನು! ಇನ್ನೋಬ್ಬ ಹಾಸನದವನೂ ಬಂದು ಮಾತನಾಡಿಸಿದ.
ಐಕ್ಯಾ ಮಾಲ್
ಇದು ಅತ್ಯಂತ ಉಪಯುಕ್ತ ವಾದ ಮಾಲ್. ಅತಿ ಕಡಿಮೆ ಬೆಲೆಯಲ್ಲಿ, ಅದ್ಬುತ ವಸ್ತುಗಳು ಇಲ್ಲಿ ಸಿಗುತ್ತವೆ. ಕೆಲವು ಅಂಥ ಹ ವಸ್ತುಗಳನ್ನು ನಾವು ಖರೀದಿಸಿದೆವು.



ಡೆಸಟ್೯ ಸಫಾರಿ
ಮರುದಿನ ಬೆಳಿಗ್ಗೆ , ಅಬುದಾಬಿಯಿಂದ ದುಬೈಗೆ ವಾಪಸಾದೆವು. ಅಂದು ಮಧ್ಯಾಹ್ನ, ಡೆಸಟ್ ೯ ಸಫಾರಿಗೆ ಹೋದೆವು. ಹೋಗುವಾಗ 'ಅನೇಕ ಮರಳು ದಿಬ್ಬಗಳ ' ದೃಶ್ಯಗಳ ಫೋಟೋ ತೆಗೆಯುವ ಆಸೆ ಇತ್ತು. ಆದರೆ, ನಮ್ಮ ವಾಹನ, ಮರಳಿನ ದಿಬ್ಬದ ಮೇಲೆ ರಭಸವಾಗಿ ಹತ್ತಿ ಇಳಿಯಲು ( Dune bashing) ಪ್ರಾರಂಭಿಸಿತು. ನನ್ನ ಹೆಂಡತಿಗಿರಲಿ, ನನಗೇ ಸ್ವಲ್ಪ ಭಯವಾಯಿತು. ಒಂದು ಕೈಯಲ್ಲಿ ನನ್ನ ಹೃದಯ, ಇನೊಂದು ಕೈಯಲ್ಲಿ ಜೀಪನ್ನು ಭದ್ರವಾಗಿ ಹಿಡಿದಿದ್ದರಿಂದ ಪೊಟೋ ತೆಗೆಯಲಾಗಲಿಲ್ಲ.
ನಂತರ, ಜೀಪಿನಿಂದ ಇಳಿದಮೇಲೆ  ಅನೇಕ ಚಿತ್ರಗಳನ್ನು  ತೆಗೆದೆ.





ಹಕ್ಕಿಯನ್ನು ಬೆನ್ನ ಮೇಲೆ, ಕೈ ಮೇಲೆ ಕೂಡಿಸಿಕೊಳ್ಳುವುದು, ಒಂಟೆ ಮೇಲೆ ಸವಾರಿ, ಕ್ವಾಡ್ ಕಾರು ಸವಾರಿಯ ನಂತರ, ಅಲ್ಲಿದ್ದ ಟೆಂಟ್ ನಲ್ಲಿ ಮನರಂಜನೆ, ಊಟ ಏಪ೯ ಡಿಸಿದ್ದರು.


ಮರುಭೂಮಿ ಯಲ್ಲೂ ಕನ್ನಡ!
ಇಲ್ಲಿ, ದುಡ್ಡಿಲ್ಲದೆ,ಎಷ್ಟುಬೇಕಾದರೂ ಕಾಫಿ ಕುಡಿಯಬಹುದು   ಆದರೆ,ಕಾಫಿ ನಾವೇ ಮಾಡಿಕೊಳ್ಳಬೇಕು. ಕಾಫಿ ಪುಡಿ , ನೀರು ಇತ್ತು.ಆದರೆ ಹಾಲು ಇರಲಿಲ್ಲ! ನನಗೆ ಅರಿವಿಲ್ಲದೆ "ಕಾಫಿ ಮಾಡುವುದು ಹೇಗೆ" ಎಂದು ಕನ್ನಡದಲ್ಲಿ ಕೇಳಿಬಿಟ್ಟೆ. ಪಕ್ಕದಲ್ಲಿದ್ದ ಹುಡುಗಿ, "ಕಾಫಿ ಪುಡಿಗೆ, ಬಿಸಿ ನೀರು ಹಾಕಿ, ಟಿನ್ ನಲ್ಲಿರುವ ಗಟ್ಟಿ ಹಾಲು ಹಾಕಿ " ಎಂದು ಕನ್ನಡದಲ್ಲಿ ಹೇಳಿ, ಟಿನ್ ತೆಗೆದುಕೊಟ್ಟಳು ! ಅವಳೂ ಬೆಂಗಳೂರಿನವಳೆಂದು ನಂತರ ತಿಳಿಯಿತು.

ಈ ಕೆಳಗಿನ ಪದ್ಯದಲ್ಲಿ, ಎಲ್ಲ ಸಾಲುಗಳ ಮೊದಲಕ್ಷರಗಳು ಸೇರಿ  "ಮರುಭೂಮಿ ಮನರಂಜನೆ" ಎಂದು ಹೊಂದಿಸಿದ್ದೇನೆ. ಅಲ್ಲಿನ ಸಂಕ್ಸಿಪ್ತ  ವಿವರ ಹಾಗು ನಮ್ಮ ಅನುಭವಗಳು   ಈ ಪದ್ಯ ದಲ್ಲಿದೆ.



ಅದ್ಬುತವಾದ ಕಾಯ೯ಕ್ರಮಗಳ ನಂತರ, ರಾತ್ರಿ ವಾಪಸ್ ಮನೆಗೆ ಬಂದೆವು.

ಮರುದಿನ, ದುಬೈನಿಂದ ವಿಮಾನದಲ್ಲಿ ಹೊರಟೆವು, ದುಬೈ ನಿಂದ ವಿಮಾನದಲ್ಲಿ ಹೊರಡುವ ಮುನ್ನ , ನನ್ನ ಹೆಂಡತಿ ಕೇಳಿದಳು, "ಇನ್ನುಳಿದ ದಿರಾಮ್ ಸಾಲುತ್ತದೆಯೇ?"
ನಾ ಹೇಳಿದೆ " ದುಬೈ ವಿಮಾನ ಹತ್ತುವ ತನಕ ಮಾತ್ರ "ದಿರಾಮು ",ಆಮೆಲೆ " ಜೈರಾಮು " ( ಎಂದರೆ , ನನ್ನ ಬಳಿಯಿರುವ ಭಾರತದ ರೂಪಾಯಿ ಬೇಕು ಎಂದು)
ಆರು ಗಂಟೆಗೆ  ಬೆಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ, ಮೋಡ ಹಾಗು ಜಾಗ ಸಿಕ್ಕದ ಕಾರಣ, ಸುಮಾರು ಮುಕ್ಕಾಲು ಗಂಟೆ ಅಗಸದಲ್ಲೇ ಸುತ್ತುತ್ತಿತ್ತು. ಆಗ ನನಗೇ  ಆತಂಕವಾಗಿತ್ತು .  ಆಶ್ಚರ್ಯವೆಂದರೆ ಆಗ ನನ್ನ ಹೆಂಡತಿಯೇ ನನಗೆ ಧೈರ್ಯ ಹೇಳಿದಳು! ಇದು, ಸುಮನ್ ಅವರು ಅವಳಿಗೆ ಧೈರ್ಯ ತುಂಬಿದ ಫಲ.
 ರಾತ್ರಿ   ಏಳು ಗಂಟೆಗೆ  ವಿಮಾನ ಬೆಂಗಳೂರಿನಲ್ಲಿ ಇಳಿಯಿತು.
ಈ ಪ್ರವಾಸ, ನಮ್ಮ ಜೀವನದ ಅತ್ಯಂತ ಸಂತಸದ ಹಾಗೂ ಎಂದೂ ಮರೆಯಲಾಗದ ಅನುಭವ. ನಮ್ಮ ಪ್ರವಾಸ ಎಷ್ಟು ಅದ್ಭು ತವಾಗಿತ್ತೆಂದರೆ, ಈಗಲೂ ಒಮ್ಮೊಮ್ಮೆ ಅನ್ನಿಸುತ್ತದೆ. " ನಾನು ನಿಜವಾಗಿಯೂ ಹೋಗಿ ಬಂದೆನೆ ? ಇಲ್ಲವೆ ಅದು ಕನಸೆ?
ಅದು ನಿಜವೆಂದು ಖಚಿತ ಪಡಿಸಿಕೊಳ್ಳಲು, ಅಲ್ಲಿ ತೆಗೆದ ಚಿತ್ರಗಳನ್ನೆಲ್ಲ ಮತ್ತೆ ಮತ್ತೆ ನೋಡುತ್ತೇನೆ!
ನಮ್ಮ ಈ ಪ್ರವಾಸವನ್ನು ಅತ್ಯಂತ ಸಮಂಜಸವಾಗಿ ಯೋಜನೆ (Plan) ಮಾಡಿದ ಹಾಗು ಪ್ರವಾಸದಲ್ಲಿ ಒಂದು ಗೆರೆಯೂ ವತ್ಯಾಸವಾಗದಂತೆ  ನಮ್ಮಜೊತೆಗೇ ಇದ್ದು, ನಮಗೆ ರುಚಿಕರವಾದ ತಿಂಡಿ, ಊಟಹಾಕಿ ನಮ್ಮನ್ನು ನೋಡಿಕೊಂಡ ಗಣೇಶ್, ಸುಮನ್, ಅನಿಕೇತ್, ಆನ್ಯ ಹಾಗು ವಿಕ್ರಮ್, ಶ್ವೇತಾ  ಅವರುಗಳಿಗೆ ಮತ್ತು ತನ್ವಿಗೂ ನಮ್ಮ ಮನದಾಳದ ಧನ್ಯವಾವಗಳು.
ಇದನ್ನು ಇನ್ನೂ ಸವಿಸ್ತಾರವಾಗಿ, ಹಾಸ್ಯಮಯವಾಗಿ ಪುಸ್ತಕ ಬರೆಯುವ ಆಸೆಯೂ ನನಗಿದೆ. ಪೂತಿ೯ ಓದಿ, ದಯವಿಟ್ಟು ನಿಮ್ಮ ಅಭಿಪ್ರಾಯ ಸಂಕೋಚವಿಲ್ಲದೆ ತಿಳಿಸಿ. ಓದುಗರಿಗೆ ಧನ್ಯವಾದಗಳು.